ತಮಿಳುನಾಡಿನ ನಂದಿ ಗುಡಿ ಎಂಬ ಊರಿನಲ್ಲಿ ರಮೇಶ್ ಮತ್ತು ಸುನಿತಾ ಎನ್ನುವ ದಂಪತಿಗಳು ವ್ಯವಸಾಯ ಮಾಡಿಕೊಂಡು ಅಲ್ಲಿ ವಾಸಿಸುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇವರ ಊರಿನಲ್ಲಿ ಸಂಖ್ಯೆ ಇಲ್ಲದೆ ಇರುವಷ್ಟು ತೆಂಗಿನ ಮರಗಳು ಮತ್ತು ಮಾವಿನ ಮರಗಳು ಇವೆ. ಒಂದು ದಿನ ಸುನಿತಾ ತನ್ನ ಮನೆಯಲ್ಲಿ ಕೆಲಸ ಮಾಡಿಕೊಂಡು ಇದ್ದಳು.
ತಮ್ಮ ಮನೆಯಲ್ಲಿ ಇರುವ ಮೇಕೆಗಳಿಗೆ ಸೊಪ್ಪು ತರಬೇಕೆಂದು ಸೊಪ್ಪನ್ನು ತೆಗೆದುಕೊಂಡು ಬರುವುದಕ್ಕೆ ತೆಂಗಿನಮರದ ತೋಟಕ್ಕೆ ಹೋದಳು. ಅಲ್ಲಿ ಯಾವುದೋ ಒಂದು ಮಗುವಿನ ಅಳುವಿನ ಶಬ್ಧ ಕೇಳಿಸಿತು. ಆಗ ಸುನಿತಾ ಅರೆ ಯಾರಪ್ಪಾ ಇದು ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಆತಂಕದಲ್ಲಿ ನೋಡುವುದಕ್ಕೆ ಹೋಗುತ್ತಾಳೆ. ತೆಂಗಿನಮರದಿಂದ ಶಬ್ದ ಕೇಳಿ ಬರುತ್ತಿದ್ದ ಕಾರಣ ಅಲ್ಲೆಲ್ಲಾ ಸುತ್ತಲೂ ನೋಡಿದರೂ ಕೂಡ ಮಗು ಸಿಗಲಿಲ್ಲ.
ಹೀಗೆ ಹುಡುಕುತ್ತಿರಬೇಕಾದರೆ ಮಗು ಅಳುವಿನ ಶಬ್ದ ಅರ್ಧಕ್ಕೆ ನಿಂತುಕೊಳ್ಳುತ್ತದೆ. ಇದಾದ ಮೇಲೆ ಸ್ವಲ್ಪ ಹೊತ್ತಿನ ನಂತರ ಮತ್ತೆ ಮಗು ಅಳು ಕೇಳಿಸುವುದಕ್ಕೆ ಶುರುವಾಗುತ್ತದೆ. ಸುನೀತಾಗೆ ಮಗುವಿನ ಅಳುವಿನ ಶಬ್ಧ ಕೇಳಿಸುತ್ತಿತ್ತು ಆದರೆ ಎಲ್ಲೂ ಹುಡುಕಿದರೂ ಕೂಡ ಮಗು ಸಿಗುತ್ತಿರಲಿಲ್ಲ. ಇದಾದ ಮೇಲೆ ಮರುದಿನ ಬಂದು ನೋಡಿದರೂ ಕೂಡ ಆ ಮಗು ಅಳುವಿನ ಶಬ್ದ ತೆಂಗಿನಮರದ ತೋಟದಿಂದ ಕೇಳಿ ಬರುತ್ತಿತ್ತು.
ಇದರಿಂದ ಭಯಗೊಂಡ ಸುನೀತಾ ತನ್ನ ಗಂಡ ರಮೇಶನಿಗೆ ಈ ವಿಚಾರವನ್ನು ಹೇಳುತ್ತಾಳೆ. ಆಗ ರಮೇಶ ಸುನೀತಾಳನ್ನು ಕುರಿತು ಇದು ನಿನ್ನ ಭ್ರಮೆ ಆಗಿರಬಹುದು ಎಂದು ನಿರ್ಲಕ್ಷಿಸುತ್ತಾನೆ. ಒಂದು ದಿನ ರಾತ್ರಿ ಎಲ್ಲರೂ ಮಲಗಿದ್ದಾಗ ರಾತ್ರಿ ಸಮಯದಲ್ಲಿ ಮಗುವಿನ ಅಳು ತೆಂಗಿನಮರ ತೋಟದಿಂದ ಕೇಳಿಬರುತ್ತದೆ. ಆದರೂ ಕೂಡ ರಮೇಶ ಇದನ್ನು ಕೇಳಿ ಅದು ಬೆಕ್ಕಿನ ಅಳುವಿನ ಸದ್ದು ಇರಬಹುದು ಎಂದು ಮತ್ತೆ ನಿರ್ಲಕ್ಷ್ಯ ಮಾಡುತ್ತಾನೆ.
ಆಗ ಸುನೀತಾ ಒಂದು ಮಗುವಿನ ಅಳು ಮತ್ತು ಬೆಕ್ಕುವಿನ ಅಳು ಹೇಗಿರುತ್ತದೆ ಎಂದು ನನಗೆ ಗೊತ್ತಿಲ್ಲವಾ ಎಂದು ಜೋರಾಗಿ ಹೇಳುತ್ತಾಳೆ. ಮರುಕ್ಷಣವೇ ದಂಪತಿಗಳಿಬ್ಬರೂ ಟಾರ್ಚ್ ಹಿಡಿದುಕೊಂಡು ತೆಂಗಿನಮರ ತೋಟಕ್ಕೆ ಹೋಗುತ್ತಾರೆ. ಅಲ್ಲಿ ಹೋದಾಗ ಮಗುವಿನ ಅಳುವಿನ ಜೊತೆಗೆ ಒಂದು ಬೆಳಕು ಕೂಡ ಕಾಣಿಸುತ್ತದೆ. ನಂತರ ಮಗು ಅಳುವಿನ ಸದ್ದು ಮತ್ತು ಬೆಳಕು ನಿಂತು ಹೋಗುತ್ತದೆ. ಇದರಿಂದ ಇವರಿಬ್ಬರು ಹೆದರಿಕೊಂಡು ಮನೆಗೆ ಹೋಗಿ ಮಲಗುತ್ತಾರೆ.
ಮರುದಿನ ಸುನೀತಾ ತಮ್ಮ ಸಹೋದರನಿಗೆ ಕರೆ ಮಾಡಿ ಹೀಗೆಲ್ಲಾ ಆಗುತ್ತಿದೆ ಎಂಬ ವಿಚಾರಗಳನ್ನು ತಿಳಿಸುತ್ತಾಳೆ. ಇದರಿಂದ ಸುನೀತಾಳ ಅಣ್ಣ ತಮ್ಮ ಗೆಳೆಯರ ಜೊತೆಗೆ ಮತ್ತು ನೂರಕ್ಕೂ ಹೆಚ್ಚು ಜನ ಊರಿನವರ ಜೊತೆಗೆ ಮಗುವಿನ ಅಳುವ ಶಬ್ದ ಕೇಳಿ ಬರುವ ಜಾಗಕ್ಕೆ ಹೋಗುತ್ತಾರೆ. ಅಲ್ಲಿ ಹೋಗಿ ನೋಡಿದರೆ ಮಗುವಿನ ಅಳುವಿನ ಶಬ್ದ ಕೇಳಿ ಬರುತ್ತದೆ ಮತ್ತು ನಿಂತುಹೋಗುತ್ತದೆ. ತದನಂತರ ಮಂತ್ರವಾದಿ ಮೂಲಕ ಇದನ್ನು ಪರಿಹಾರ ಮಾಡಬೇಕೆಂದು ಮಂತ್ರವಾದಿಯನ್ನು ಕೂಡ ಕರೆಸುತ್ತಾರೆ.
ಆ ಮಂತ್ರವಾದಿ ಆ ಮರಕ್ಕೆ ಏನೇನೋ ಶಾಸ್ತ್ರಗಳನ್ನು ಮಾಡಿ ಇಲ್ಲಿರುವ ದೆವ್ವವನ್ನು ನಾನು ಓಡಿಸಿದ್ದೇನೆ ಎಂದು ಹೇಳಿ ರಮೇಶ್ ಅವರ ಬಳಿ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ನಮಗೆ ದೆವ್ವದ ಕಾಟ ತಪ್ಪಿತು ಎಂದು ಆರಾಮಾಗಿ ಗಂಡ ಹೆಂಡತಿ ಮನೆಯಲ್ಲಿ ಮಲಗುತ್ತಾರೆ. ಆದರೆ ಮರುದಿನ ಬೆಳಬೆಳಗ್ಗೇನೇ ಮಗುವಿನ ಅಳು ತೆಂಗಿನಮರ ತೋಟದಿಂದ ಎಡಬಿಡದಂತೆ ಕೇಳುತ್ತಲೇ ಬರುತ್ತಿತ್ತು.
ಆಗ ಏನೇ ಆಗಲಿ ಎಂದು ದಂಪತಿಗಳು ಮತ್ತೆ ತೋಟಕ್ಕೆ ಹೋಗಿ ನೋಡುತ್ತಾರೆ. ಅಲ್ಲಿ ಹೋಗಿ ನೋಡಿದಾಗ ಆ ತೆಂಗಿನ ಮರದ ಮೇಲಿಂದ ಒಬ್ಬ ವ್ಯಕ್ತಿ ಸರಸರನೆ ಕೆಳಗಿಳಿಯುತ್ತಾನೆ. ಇದನ್ನು ನೋಡಿ ಆ ದಂಪತಿಗಳು ಬೆಚ್ಚಿಬಿದ್ದರು. ಆದರೆ ಆ ವ್ಯಕ್ತಿ ಬೇರಾರೂ ಅಲ್ಲ ತೆಂಗಿನಕಾಯಿಗಳನ್ನು ಕೀಳುವ ಪಕ್ಕದೂರಿನ ಸಿದ್ಧಲಿಂಗ ಎನ್ನುವ ವ್ಯಕ್ತಿ. ಆಗ ಸಿದ್ಧಲಿಂಗ ರಮೇಶ್ ಅನ್ನು ಕುರಿತು ನೀವು ನನ್ನನ್ನು ಒಂದು ಬಾರಿ ತೆಂಗಿನಕಾಯಿಗಳನ್ನು ಕೀಳಿಸಲು ಕಳಿಸಿದ್ದೀರಿ.
ನಾನು ನನ್ನ ಫೋನನ್ನು ಮರೆತು ಎಲ್ಲೋ ಬಿಟ್ಟು ಹೋಗಿದ್ದೆ. ಆಗಿನಿಂದ ನಾನು ಎಲ್ಲಾ ತೆಂಗಿನ ಮರಗಳನ್ನು ಹತ್ತಿ ನನ್ನ ಫೋನ್ ಗಾಗಿ ಹುಡುಕಾಡುತ್ತಿದ್ದೆ. ಕೊನೆಗೆ ನನ್ನ ಫೋನ್ ಇಲ್ಲಿ ದೊರಕಿತು. ಆ ಮಗುವಿನ ಅಳು ಕೇಳಿಸಿದ್ದು ಯಾವುದೋ ದೆವ್ವ ಭೂತ ಅಲ್ಲ ಬಳಿಕ ಸಿದ್ಧಲಿಂಗ ಅವರ ಫೋನ್ ರಿಂಗ್ ಟೋನ್. ಇದನ್ನು ಕೇಳಿದರೆ ನಿಜವಾಗಿ ಅಳಬೇಕೋ ನಗಬೇಕೋ ಒಂದೂ ಗೊತ್ತಿಲ್ಲ……